ಡಾಲ್ಟನ್, ಜಾನ್

	1766-1844. ಇಂಗ್ಲೆಂಡಿನ ರಸಾಯನವಿe್ಞÁನಿ. ಜನನ (6-9-1766) ಇಂಗ್ಲೆಂಡಿನ ಕಂಬರ್‍ಲೆಂಡ್ ಪ್ರಾಂತ್ಯದ ಈಗಲ್ಸ್ ಫೀಲ್ಡ್ ಎಂಬ ಹಳ್ಳಿಯಲ್ಲಿ. ಇವನ ತಂದೆ ಕ್ವೇಕರ್ ಪಂಗಡಕ್ಕೆ (ನೋಡಿ- ಕ್ವೇಕರ್-ಚಳವಳಿ) ಸೇರಿದವ; ನೇಯ್ಗೆ ಕೆಲಸಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಡಾಲ್ಟನ್ನನಿಗೆ ಚಿಕ್ಕವಯಸ್ಸಿನಲ್ಲಿಯೇ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. ತಾನು ಹೋಗುತ್ತಿದ್ದ ಪಾಠಶಾಲೆಯಲ್ಲಿ ಉಪಾಧ್ಯಾಯರ ನೆರವಿಲ್ಲದೆಯೇ ಅನೇಕ ಲೆಕ್ಕಗಳನ್ನು ಸ್ವತಃ ಮಾಡಿಬಿಡುತ್ತಿದ್ದ. ಇವನ ಉಪಾಧ್ಯಾಯರಲ್ಲೊಬ್ಬನಾದ ರಾಬಿನ್‍ಸನ್ ಎಂಬಾತ ಕಠಿಣ ಲೆಕ್ಕಗಳನ್ನು ಬೇಗ ಮಾಡಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ಮೇಣದ ಬತ್ತಿಯನ್ನು ಬಹುಮಾನವಾಗಿ ಕೊಡುವ ಪದ್ಧತಿ ಇಟ್ಟಿದ್ದನಂತೆ. ಚಿಕ್ಕಂದಿನಲ್ಲೇ ಬಲು ಚುರುಕುಬುದ್ಧಿಯವನಾಗಿದ್ದ ಡಾಲ್ಟನ್ ರಾಬಿನ್‍ಸನ್ನನಿಂದ ಅನೇಕ ಮೇಣದ ಬತ್ತಿಗಳನ್ನು ಪಡೆದುಕೊಂಡಿದ್ದುಂಟು.

	ಹನ್ನೆರಡನೆಯ ವಯಸ್ಸಿನಲ್ಲಿ ಡಾಲ್ಟನ್ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಆ ಹಳ್ಳಿಯಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಿದ. ತನಗಿಂತ ಕಿರಿಯವರಾದ ಹುಡುಗರಿಗೆ ವಿದ್ಯೆಯನ್ನು ಕಲಿಸಿಕೊಡುವ ಧೈರ್ಯ ಇವನಿಗಿತ್ತು. ಜೊತೆಗೆ ಇದಕ್ಕೆ ಪೋಷಕವಾಗಿದ್ದುದು ಕ್ವೇಕರ್ ಮನೆತನದ ಧರ್ಮಬೋಧನೆಯ ವೃತ್ತಿಯ ಸಂಸ್ಕಾರ. ಈ ಶಾಲೆಯಲ್ಲಿ ಕಲಿಯಲು ಬಂದ ಹುಡುಗರಿಗೆ ಲೇಖನಿ ಮತ್ತು ಮಸಿಯನ್ನು ಉಚಿತವಾಗಿ ಕೊಡುತ್ತಿದ್ದುದು ಡಾಲ್ಟನ್ನನ ಧಾರಾಳತನವನ್ನು ಎತ್ತಿತೋರಿಸುತ್ತದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲದೆ ವಯಸ್ಸಿಗೆ ಬಂದ ತರುಣರೂ ಇವನ ಶಾಲೆಗೆ ಸೇರಿದರು. ಆದರೆ ಕಾಲ ಸರಿದಂತೆ ಪರಿಸ್ಥಿತಿ ತೃಪ್ತಿಕರವಾಗಿ ಕಂಡುಬರದಿದ್ದುದರಿಂದ ಡಾಲ್ಟನ್ ಶಾಲೆಯನ್ನು ಮುಚ್ಚಿದ.

	ಹತ್ತಿರದ ಸಂಬಂಧಿಯೊಬ್ಬ ವ್ಯವಸಾಯಮಾಡಿ ಬದುಕನ್ನು ಸಾಗಿಸುವಂತೆ ನೀಡಿದ ಸಲಹೆಯನ್ನು ಡಾಲ್ಟನ್ ತಾತ್ಕಾಲಿಕವಾಗಿ ಸ್ವೀಕರಿಸಿ ಕೆಲಕಾಲದ ವರೆಗೆ ಬಾಳ್ವೆ ನಡೆಸಿದ. ಬೋಧನವೃತ್ತಿಯಲ್ಲೇ ಇವನ ಒಲವು ಹೆಚ್ಚು ಇತ್ತು. ಡಾಲ್ಟನ್ ಮತ್ತು ಅವನ ಅಣ್ಣ ಜೊನಾಥನ್ ಇಬ್ಬರೂ ಸೇರಿ ಕೆಂಡಾಲ್ ಎಂಬಲ್ಲಿ ಕ್ವೇಕರ್ ಶಾಲೆಯೊಂದನ್ನು ಸ್ಥಾಪಿಸಿದರು. ಫ್ರೆಂಚ್, ಇಂಗ್ಲಿಷ್, ಗಣಿತ, ವಾಣಿಜ್ಯ ಮುಂತಾದ ವಿಷಯಗಳನ್ನು ಆ ಶಾಲೆಯಲ್ಲಿ ಬೋಧಿಸುತ್ತಿದ್ದರು. ಶಾಲೆಗೆ ರಜೆ ಬಂದಾಗ ಅಕ್ಕಪಕ್ಕದ ಹಳ್ಳಿಗಳಿಗೆ ಡಾಲ್ಟನ್ ಹೋಗಿ ಧಾರ್ಮಿಕ ವಿಚಾರವಾಗಿಯೂ ವಿe್ಞÁನ ವಿಚಾರವಾಗಿಯೂ ಉಪನ್ಯಾಸಗಳನ್ನು ಕೊಡುತ್ತಿದ್ದ. ಹಳ್ಳಿಗಳಿಗೆ ಹೋಗಿಬರುವ ಖರ್ಚನ್ನು ಸರಿದೂಗಿಸುವ ಸಲುವಾಗಿ e್ಞÁನಪ್ರದವೂ ಬೋಧಪ್ರದವೂ ಆದ ಭಾಷಣಮಾಲೆಯನ್ನೇ ತಯಾರಿಸಿ ಪ್ರಕಟಿಸಿದ. ವಾಯು, ಬೆಳಕು, ಶಬ್ದ, ಗ್ರಹಣಗಳು, ಗ್ರಹಗಳು, ಅಲೆಗಳು- ಇವೇ ಮೊದಲಾದವು ಇವನ ಭಾಷಣದ ವಿಷಯಗಳಾಗಿದ್ದುವು. ಭಾಷಣಗಳನ್ನು ಕೇಳಲು ಬರುವಂಥವರು ಅರ್ಥ ಗಿನಿಯಷ್ಟು ಹಣವನ್ನು ಚಂದವಾಗಿ ಕೊಡಬೇಕಾಗಿತ್ತು. ಮೊದಮೊದಲಿಗೆ ಇವನ ಭಾಷಣಗಳು ರಸವತ್ತಾಗಿ ಕಂಡುಬಂದರೂ ಕಾಲಕ್ರಮೇಣ ಇವು ನಿಂತುಹೋದುವು. 

	ಕಂಬರ್‍ಲ್ಯಾಂಡ್ ಪ್ರಾಂತ್ಯದಲ್ಲಿ ಮಳೆ ಹೆಚ್ಚು ಬೀಳುತ್ತಿತ್ತು. ಆ ಪ್ರದೇಶದ ಹವೆಯನ್ನು ಕುರಿತಂತೆ ಡಾಲ್ಟನ್ ಅಧ್ಯಯನಗಳನ್ನು ನಡೆಸಿದ. ಇದಕ್ಕಾಗಿ ಹವೆಯನ್ನು ನಿರ್ಧರಿಸುವಂಥ ಉಪಕರಣಗಳನ್ನೂ ಸ್ವತಃ ತಯಾರಿಸಿದ. ತನ್ನ ವೀಕ್ಷಣೆಗಳನ್ನೆಲ್ಲ ಕ್ರೋಡೀಕರಿಸಿ ಮೀಟಿಯೊರೊಲಾಜಿಕಲ್ ಆಬ್ಸರ್‍ವೇಷನ್ಸ್ ಅಂಡ್ ಎಸ್ಸೇಸ್ ಎಂಬ ಗ್ರಂಥವನ್ನು ರಚಿಸಿದ (1793). ಹವೆಯನ್ನು ಕುರಿತಂತೆ ವಿವಿಧ ಮುನ್ಸೂಚನೆಗಳನ್ನು ಈತ ನೀಡುತ್ತಿದ್ದುದರ ಸಲುವಾಗಿ ಆ ಪ್ರಾಂತ್ಯದವರು ಈತನನ್ನು ಹವಾಜ್ಯೋತಿಷ್ಕನೆಂದೇ ಕರೆಯುತ್ತಿದ್ದರು. ಜೀವಶಾಸ್ತ್ರದಲ್ಲೂ ಈತನಿಗೆ ಆಸಕ್ತಿ ಇತ್ತು. ಕೆಲವೊಂದು ಬಗೆಯ ವಿಷಕೀಟಗಳ ಬಗ್ಗೆಯೂ ಅಧ್ಯಯನ ನಡೆಸಿದ್ದ. ಈ ವೇಳೆಗೆ ಮ್ಯಾಂಚೆಸ್ಟರ್ ಪಟ್ಟಣದಲ್ಲಿ ಹೊಸ ಕಾಲೇಜೊಂದು ಸ್ಥಾಪನೆಯಾಯಿತು. ಇದರಲ್ಲಿ ಡಾಲ್ಟನ್ ಅಧ್ಯಾಪಕವೃತ್ತಿ ಕೈಗೊಂಡ (1793). ಆದರೆ ಹೆಚ್ಚುಕಾಲ ಅದರಲ್ಲಿ ಮುಂದುವರಿಯಲಿಲ್ಲ. ತಾನೇ ಸ್ವತಃ ಬಣ್ಣಗುರುಡನಾಗಿದ್ದರೂ ವರ್ಣದೃಷ್ಟಿಮಾಂದ್ಯವನ್ನು ಕುರಿತಂತೆ ಒಂದು ಗ್ರಂಥವನ್ನು ಹೊರತಂದ (1794). ಇದರಿಂದಾಗಿ ವರ್ಣದೃಷ್ಟಿಮಾಂದ್ಯ ಸ್ಥಿತಿಯನ್ನು ಕೆಲವೊಂದು ವೇಳೆ ಡಾಲ್ಟನಿಸಮ್ ಎಂದು ಹೇಳುವುದುಂಟು. ರಸಾಯನವಿe್ಞÁನದತ್ತ ಡಾಲ್ಟನ್ನನಿಗೆ ಅಧಿಕ ಒಲವು ಬೆಳೆಯಿತು. ಪ್ರಯೋಗಾತ್ಮಕವಾಗಿ ರಸಾಯನವಿe್ಞÁನವನ್ನು ಅಭ್ಯಸಿಸಬೇಕು ಎಂಬುದು ಅವನ ಆಶೆ. ಪ್ರಯೋಗಗಳಿಗೆಂದೇ ಒಂದು ಚಿಕ್ಕ ಕೊಠಡಿಯನ್ನು ಸಜ್ಜುಗೊಳಿಸಿಕೊಂಡು ವಾತಾವರಣದಲ್ಲಿನ ಅನಿಲಗಳ ಸ್ವರೂಪಗಳ ಬಗ್ಗೆ ಪ್ರಯೋಗಗಳನ್ನು ನಡೆಸಿದ. ಅನಿಲಗಳು ಸಣ್ಣ ಸಣ್ಣ ಕಣಗಳಿಂದ ಕೂಡಿರುತ್ತವೆ ಎಂಬ ವಿಚಾರವಾಗಿ ಈತ ಹೆಚ್ಚಿನ ಅಧ್ಯಯನಗಳನ್ನೂ ಸಂಶೋಧನೆಗಳನ್ನೂ ಮಾಡಿ ಅನಿಲ ಮಿಶ್ರಣದ ಒತ್ತಡಕ್ಕೂ ಆ ಮಿಶ್ರಣದಲ್ಲಿರುವ ಒಂದೊಂದು ಅನಿಲದ ಆಂಶಿಕ ಒತ್ತಡಕ್ಕೂ ಇರುವ ಸಂಬಂಧವನ್ನು ಕುರಿತಂತೆ ಒಂದು ನಿಯಮವನ್ನೇ (ಅನಿಲಗಳ ಆಂಶಿಕ ಒತ್ತಡ ನಿಯಮ) ಮುಂದಿಟ್ಟ (1801). ಗೊತ್ತಾದ ಉಷ್ಣತೆಯಲ್ಲಿ ಒಂದು ಅನಿಲ ಮಿಶ್ರಣದಲ್ಲಿನ ಪ್ರತಿಯೊಂದು ಅನಿಲಘಟಕವೂ ಆ ಅನಿಲಗಾತ್ರವನ್ನೆಲ್ಲ ತಾನೇ ಒಟ್ಟಾಗಿ ಆವರಿಸಿಕೊಂಡಾಗ ಇರುವ ಒತ್ತಡದಷ್ಟೇ ಮೊತ್ತದ ಒತ್ತಡವನ್ನು ಪ್ರತ್ಯೇಕವಾಗಿ ಪ್ರಯಕ್ತಿಸುತ್ತದೆ ಎಂಬುದು ಈ ನಿಯಮದ ತಾತ್ಪರ್ಯ.

	ವಸ್ತುಸ್ವರೂಪದ ಬಗ್ಗೆ ಡಾಲ್ಟನ್ ಅನೇಕ ಅಧ್ಯಯನಗಳನ್ನು ನಡೆಸಿ, ಕೇವಲ ಅನಿಲಗಳು ಮಾತ್ರವಲ್ಲದೆ ಎಲ್ಲ ವಸ್ತುಗಳೂ ಸೂಕ್ಷ್ಮಕಣಗಳಿಂದ ಉಂಟಾಗಿವೆ ಎಂಬುದನ್ನೂ ಮನಗಂಡ. ಇಂಥ ಅತಿ ಸೂಕ್ಷ್ಮಕಣಗಳ (ಪರಮಾಣುಗಳ) ಅಸ್ತಿತ್ವವನ್ನು ಕುರಿತಂತೆ ಒಂದು ವಿಶೇಷ ಸಿದ್ಧಾಂತವನ್ನು ಮುಂದಿಟ್ಟ. ಇದೇ ಡಾಲ್ಟನ್ನನ ಪರಮಾಣು ಸಿದ್ಧಾಂತ. ಪ್ರತಿಯೊಂದು ವಸ್ತುವೂ ಕಣ್ಣಿಗೆ ಕಾಣಿಸದಂಥ ಅತಿಸೂಕ್ಷ್ಮ ಪರಮಾಣುಗಳಿಂದಾಗಿದೆ. ಇವು ವಸ್ತುವಿನ ರಾಸಾಯನಿಕ ಕ್ರಿಯೆಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತವೆ. ಇವನ್ನು ಮತ್ತೆ ಸಣ್ಣ ಕಣಗಳನ್ನಾಗಿ ವಿಭಾಗಿಸುವುದು ಸಾಧ್ಯವಿಲ್ಲ. ಒಂದೆ ಧಾತುವಿನ (ಎಲಿಮೆಂಟ್) ಪರಮಾಣುಗಳಿಗೆಲ್ಲ ಒಂದೇ ತೂಕ ಮತ್ತು ಗುಣಗಳಿರುತ್ತವೆ. ಬೇರೆ ಬೇರೆ ಧಾತುಗಳ ಪರಮಾಣುಗಳು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಒಂದಕ್ಕೊಂದು ಕೂಡಿಕೊಂಡು ರಾಸಾಯನಿಕ ಸಂಯುಕ್ತಗಳನ್ನು ಉಂಟುಮಾಡುವುವು. ಈ ಪರಮಾಣುಗಳನ್ನು ಕೃತಕವಾಗಿ ಸೃಷ್ಟಿಮಾಡುವುದಾಗಲಿ ನಾಶಮಾಡುವುದಾಗಲಿ ಸಾಧ್ಯವಿಲ್ಲ. ಇವೇ ಡಾಲ್ಟನ್ ಪರಮಾಣು ಸಿದ್ಧಾಂತದ ಮುಖ್ಯ ಅಂಶಗಳು. ರಾಸಾಯನಿಕ ಕ್ರಿಯೆಗಳನ್ನು ಈ ಸಿದ್ಧಾಂತದ ಸಹಾಯದಿಂದ ಯಶಸ್ವಿಯಾಗಿ ವಿವರಿಸಬಹುದೆಂದು ಡಾಲ್ಟನ್ ತೋರಿಸಿದ. ಧಾತುಗಳನ್ನು ಗುರುತಿಸಲು ಪ್ರತೀಕ ಕ್ರಮವೊಂದನ್ನು ಸೂಚಿಸಿದ್ದುಂಟು. ಆದರೆ ಅದು ಈಗ ಬಳಕೆಯಲ್ಲಿಲ್ಲ. ಪರಮಾಣು-ಪರಮಾಣುಗಳಿಗಿರುವ ಪರಸ್ಪರ ತೂಕವನ್ನು ನಿರ್ಧರಿಸಲು ಒಂದು ವಿಧಾನವನ್ನು ಡಾಲ್ಟನ್ ನಿರೂಪಿಸಿದ. ಫ್ರಾನ್ಸಿನ ರಸಾಯನ ವಿe್ಞÁನಿ ಪ್ರೌಸ್ಟ್ (1754-1826) ಎಂಬಾತನ ನಿರ್ದಿಷ್ಟ ಅನುಪಾತಗಳ ನಿಯಮದಿಂದ (ಲಾ ಆಫ್ ಡೆಫಿನೆಟ್ ಪ್ರಪೋರ್ಷನ್ಸ್) ಪ್ರಭಾವಿತನಾದ ಡಾಲ್ಟನ್ ವಸ್ತುಗಳ ಪರಮಾಣು ಸ್ವರೂಪವನ್ನು ಕುರಿತಂತೆ ಹೆಚ್ಚಿನ ಅಧ್ಯಯನ ನಡೆಸಿದ (1788). ಅನಿಲಮಿಶ್ರಣದ ಮೂಲಘಟಕಗಳು (ಉದಾಹರಣೆಗೆ ಕಾರ್ಬನ್ ಡೈಆಕ್ಸೈಡ್ ಅನಿಲದ ಆಕ್ಸಿಜನ್ ಮತ್ತು ಕಾರ್ಬನ್) ನೀರಿನ ಮೂಲಘಟಕಗಳಾದ ಆಕ್ಸಿಜನ್ ಮತ್ತು ಹೈಡ್ರೊಜನ್) ಹೇಗೆ ಒಂದಕ್ಕೊಂದು ಯಾವ ಯಾವ ಅನುಪಾತದಲ್ಲಿ ಸಂಯೋಗಿಸಿರುತ್ತವೆ-ಮುಂತಾದ ವಿಷಯಗಳತ್ತ ಡಾಲ್ಟನ್ ಲಕ್ಷ್ಯ ಹರಿಸಿದ. ಇದರಿಂದಾಗಿ ಗುಣಿತಾನುಪಾತಗಳ ನಿಯಮವನ್ನು (ಲಾ ಆಫ್ ಮಲ್ಟಿಪಲ್ ಪ್ರಪೋರ್ಷನ್ಸ್) ಮತ್ತಷ್ಟು ಸ್ಪಷ್ಟವಾಗಿ ನಿರೂಪಿಸಲು (1803) ಡಾಲ್ಟನ್ನನಿಗೆ ಸಾಧ್ಯವಾಯಿತು. ತಾನು ಶ್ರುತಪಡಿಸಿದ ಈ ವಾದ ಇಪ್ಪತ್ತೊಂದು ಶತಮಾನಗಳ ಹಿಂದೆಯೇ ಗ್ರೀಕ್ ತತ್ತ್ವವಿe್ಞÁನಿ ಡಿಮಾಕ್ರಿಟಸ್ (ಕ್ರಿ.ಪೂ.ಸು. 460- ಕ್ರಿ.ಪೂ.ಸು. 370) (ನೋಡಿ- ಡಿಮಾಕ್ರಿಟಸ್) ಎಂಬಾತನಿಂದ ಪ್ರತಿಪಾದಿಸಲ್ಪಟ್ಟಿದ್ದ ಪರಮಾಣು ತತ್ವಕ್ಕೆ ಅನುಗುಣವಾಗಿದ್ದುದನ್ನು ಡಾಲ್ಟನ್ ಮನಗಂಡ. ಧಾತುಗಳಲ್ಲಿನ ಅತಿಸೂಕ್ಷ್ಮಕಣಗಳಿಗೆ ಪರಮಾಣು ಎಂಬುದಾಗಿ ಹೆಸರಿತ್ತ ಡಿಮಾಕ್ರಿಟಸನ ವಾದಸರಣಿ ಕೇವಲ ತಾತ್ತ್ವಿಕವಾಗಿದ್ದರೂ ಡಾಲ್ಟನ್ನನದು ಒಂದು ವೈe್ಞÁನಿಕ ಸ್ವರೂಪದ್ದಾಗಿತ್ತು.

	ಡಾಲ್ಟನ್ ತನ್ನ ಪರಮಾಣು ವಾದವನ್ನು ಕುರಿತ ವಿಚಾರವನ್ನು 1803ರಲ್ಲಿ ನಿರೂಪಿಸಿದನಾದರೂ ಅದನ್ನು ಶಾಸ್ತ್ರೀಯವಾಗಿಯೂ ಸವಿವರವಾಗಿಯೂ ಒಂದು ಪುಸ್ತಕರೂಪದಲ್ಲಿ (ನ್ಯೂ ಸಿಸ್ಟಮ್ ಆಫ್ ಕೆಮಿಕಲ್ ಫಿಲಾಸಫಿ) ಪ್ರಕಟಿಸಿದ್ದು 1808ರಲ್ಲಿ. ಬಹುಮಂದಿ ರಸಾಯನವಿe್ಞÁನಿಗಳು ಇವನ ಪರಮಾಣುವಾದವನ್ನು ಒಪ್ಪಿಕೊಂಡು ಸಮ್ಮತಿಯನ್ನು ಸೂಚಿಸಿದ್ದರೂ ಕೆಲವೊಮ್ಮೆ ಇದಕ್ಕೆ ವಿರೋಧಗಳೂ ಬಂದದ್ದುಂಟು. ವೂಲ್‍ಸ್ಟನ್ (1766-1828) ಮೊದಲಾದ ರಸಾಯನವಿe್ಞÁನಿಗಳು ಒಮ್ಮೆಲೇ ವಾದವನ್ನು ಸ್ವೀಕರಿಸಿದರೂ ಡೇವಿ (1778-1829) ಅವನಂಥವರು ಇದರ ಬಗ್ಗೆ ಕೆಲಕಾಲ ಮೂಗುಮುರಿದು ಅನಂತರ ಒಪ್ಪಿಕೊಂಡ ಸಂಗತಿಗಳು ಇಲ್ಲದಿಲ್ಲ. ಸುಮಾರು ಒಂದು ಶತಮಾನದ ವರೆಗೂ ಡಾಲ್ಟನ್ನನ ಈ ವಾದದ ಬಗ್ಗೆ ವಿರೋಧ ಇತ್ತು. 20ನೆಯ ಶತಮಾನದಲ್ಲೂ ಬದುಕಿ ಬಾಳಿದಂಥ ಭೌತರಸಾಯನವಿe್ಞÁನಿ ಆಸ್ಟ್‍ವಾಲ್ಟ್ (1853-1932) ಎಂಬವನಿಂದಲೂ ಡಾಲ್ಟನ್ನನ ಪರಮಾಣು ತತ್ತ್ವದ ಬಗ್ಗೆ ಆಕ್ಷೇಪಣೆ ಇತ್ತು.

	ಕ್ವೇಕರ್ ಪಂಥದ ಬಗ್ಗೆ ಡಾಲ್ಟನ್ನನಿಗಿದ್ದ ನಂಬಿಕೆ ಅವನನ್ನು ಹೆಚ್ಚಿನ ಕೀರ್ತಿಯೆಡೆಗೆ ಕೊಂಡೊಯ್ಯಲಿಲ್ಲ. 1810ರಲ್ಲಿ ಇವನನ್ನು ರಾಯಲ್ ಸೊಸೈಟಿಗೆ ನಾಮಕರಿಸಿದಾಗ ಅದನ್ನು ತಿರಸ್ಕರಿಸಿದ. ಆದರೂ 1822ರಲ್ಲಿ ಆ ಸದಸ್ಯತ್ತ್ವ ಇವನ ಅರಿವಿಲ್ಲದಂತೆಯೇ ಇವನಿಗೆ ಲಭಿಸಿತು. ಇವನ ಪರಮಾಣು ವಾದದ ಹಿರಿಮೆ ಪ್ರಪಂಚದ ನಾನಾ ಭಾಗಗಳಲ್ಲಿ ವ್ಯಾಪಿಸಿತು. ಇದರಿಂದಾಗಿ ಸ್ಥಳೀಯ ಹಾಗೂ ಹೊರಗಿನ ವಿe್ಞÁನ ಸಂಘಸಂಸ್ಥೆಗಳಿಂದ ಇವನಿಗೆ ಗೌರವ ಮರ್ಯಾದೆ ಲಭಿಸಿದುವು. ಇದರಿಂದಾಗಿ ಕ್ವೇಕರ್ ಸಂಪ್ರದಾಯದ ಮನೋಭಾವವನ್ನು ಡಾಲ್ಟನ್ ಕ್ರಮೇಣ ತ್ಯಜಿಸಬೇಕಾಯಿತು. ತಾನು ಪ್ರತಿಪಾದಿಸಿದ ವಾದವನ್ನು ಕುರಿತಂತೆ ಹೊರಗಿನ ವಿದ್ವದ್‍ಗೋಷ್ಠಿಗಳಲ್ಲಿ ಈತ ಭಾಗವಹಿಸುವ ಅವಕಾಶ ಉಂಟಾಯಿತು. ಫ್ರಾನ್ಸಿನ ಖ್ಯಾತ ರಸಾಯನವಿe್ಞÁನಿ ಜೋಸೆಫ್ ಪಿಯರ್ ಪೆಲ್ಟಿಯರ್ (1788-1842) ಅವನಂಥ ಮೇಧಾವಿಗಳು ಡಾಲ್ಟನ್ನನನ್ನು ನೋಡುವ ಸಲುವಾಗಿಯೇ ಮ್ಯಾಂಚೆಸ್ಟರಿಗೆ ಬರಲಾರಂಭಿಸಿದರು. ಡಾಲ್ಟನ್ ಪ್ಯಾರಿಸ್ಸಿಗೆ ಭೇಟಿಕೊಟ್ಟಾಗ ಲಾಪ್ಲಾಸ್, ಹಮ್‍ಬೊಲ್ಟ್ ಮುಂತಾದ ಮೇಧಾವಿಗಳಾದಿಯಾಗಿ ಅವನನ್ನು ಬರಮಾಡಿಕೊಂಡು ಪ್ರಶಂಸಿಸಿದರು.

	ವಿe್ಞÁನದ ಅಭಿವೃದ್ಧಿಗೋಸ್ಕರ ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‍ಮೆಂಟ್ ಆಫ್ ಸೈನ್ಸ್ ಎಂಬುದರ ಸ್ಥಾಪನೆಗೆ (1831) ಡಾಲ್ಟನ್ ಬಹಳ ಸಹಾಯಮಾಡಿದ. 1832ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಈತನಿಗೆ ಡಾಕ್ಟೊರಲ್ ಪದವಿ ನೀಡಿತು. ಇದರಿಂದಾಗಿ 4ನೆಯ ವಿಲಿಯಮ್ ದೊರೆಯನ್ನು ಭೇಟಿಮಾಡುವ ಅವಕಾಶ ಡಾಲ್ಟನ್ನನಿಗೆ ಒದಗಿಬಂತು. ದೊರೆಯನ್ನು ಸಂದರ್ಶಿಸಲು ಹೋಗುವಾಗ ರಾಜಾಸ್ಥಾನದ ವಿಶೇಷ ಉಡುಪನ್ನು ಧರಿಸಬೇಕಾಗಿದ್ದುದರಿಂದ ಅರಮನೆಗೆ ಹೋಗಲು ಡಾಲ್ಟನ್ ನಿರಾಕರಿಸಿದ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಕಡುಗೆಂಪಿನ ಉಡುಪು ಈ ಕೆಲಸಕ್ಕೆ ಸಾಕಾಗುತ್ತಿತ್ತು. ಆದರೆ ಇಂಥ ಬಣ್ಣದ ಉಡುಪನ್ನು ತೊಡುವುದಕ್ಕೆ ಕ್ವೇಕರ್ ಸಂಪ್ರದಾಯದ ರೀತ್ಯ ಅವಕಾಶವಿರಲಿಲ್ಲ. ಇವನಿಗಿದ್ದ ಬಣ್ಣಗುರುಡುತನದ ಸಲುವಾಗಿ ಡಾಲ್ಟನ್ ತಾನು ತೊಟ್ಟಿದ್ದ ಕಡುಗೆಂಪಿನ ಬಣ್ಣದ ಉಡುಪನ್ನು ಬೂದುಬಣ್ಣದ ಉಡುಪೆಂದೇ ಭಾವಿಸಿಕೊಂಡು ರಾಜಾಸ್ಥಾನವನ್ನು ಪ್ರವೇಶಿಸಿ ರಾಜನನ್ನು ಭೇಟಿಮಾಡಿದ.

	ತನಗೆ ಬಂದ ಖ್ಯಾತಿಯನ್ನು ಡಾಲ್ಟನ್ ಎಂದೂ ಯಾವುದೇ ಬಿಗುಮಾನದಿಂದ ಸ್ವೀಕರಿಸಲಿಲ್ಲ. ಸಾರ್ವಜನಿಕ ಸಮಾರಂಭಗಳಲ್ಲೂ ಕೂಟಗಳಲ್ಲೂ ಈತ ಭಾಗವಹಿಸುತ್ತಿದ್ದುದುಂಟು. ಈತನಿಗೆ ಮದ್ಯಪಾನದ ಚಟ ಬಹಳವಾಗಿತ್ತು. ಇದರಿಂದ ಕ್ರಮೇಣ ಇವನ ಆರೋಗ್ಯ ಕೆಟ್ಟು ಪುನಃ ಮ್ಯಾಂಚೆಸ್ಟರಿಗೆ ಹಿಂತಿರುಗಬೇಕಾಯಿತು. ಇಂಗ್ಲೆಂಡಿನ ದೊರೆ ಇವನ ಪಾಂಡಿತ್ಯ, ಮೇಧಾಶಕ್ತಿಯನ್ನು ಮನಗಂಡು ಇವನಿಗೆ ವಿಶ್ರಾಂತಿವೇತನ ನೀಡುವ ಏರ್ಪಾಡುಮಾಡಿದ. ಮ್ಯಾಂಚೆಸ್ಟರಿನ ಪ್ರಮುಖರೆಲ್ಲ ಸೇರಿ ಇವನ ಶಿಲಾಪ್ರತಿಮೆಯೊಂದನ್ನು ಮಾಡಿಸಿದರು. ದೇಹಾರೋಗ್ಯ ಹದಗೆಟ್ಟು, ಪಾಶ್ರ್ವವಾಯುಪೀಡಿನಾದ ಡಾಲ್ಟನ್ ತಾನು ನಡೆಸಿದ ಹವಾ ವೀಕ್ಷಣೆಯ ಟಿಪ್ಪಣಿ ಬರೆಯುತ್ತಿದ್ದಾಗಲೇ ಅಸುನೀಗಿದ (27-7-1844).

	ಡಾಲ್ಟನ್ನನ ಆಂಶಿಕ ಒತ್ತಡ ನಿಯಮ : ಅನಿಲ ಮಿಶ್ರಣವೊಂದರ ಒಟ್ಟಾರೆ ಒತ್ತಡಕ್ಕೂ ಆ ಮಿಶ್ರಣದಲ್ಲಿರುವ ಒಂದೊಂದು ಅನಿಲ ಘಟಕದ ಆಂಶಿಕ ಒತ್ತಡಕ್ಕೂ ಇರುವ ಸಂಬಂಧವನ್ನು ತಿಳಿಸಲು ಜಾನ್ ಡಾಲ್ಟನ್ ನಿರೂಪಿಸಿದ (1801) ನಿಯಮ. ವಾಯುವು ಸ್ಥಿತಿಸ್ಥಾಪಕತ್ವ ಗುಣವಿರುವ ಒಂದು ತರಲ ಎಂಬ ನ್ಯೂಟನ್ನನ ಅಭಿಪ್ರಾಯವನ್ನು ಬಳಸಿಕೊಂಡು ಡಾಲ್ಟನ್ ಈ ನಿಯಮವನ್ನು ಮುಂದಿಟ್ಟ. ಪರಸ್ಪರ ರಾಸಾಯನಿಕ ಪರಿವರ್ತನೆ ಹೊಂದದಿರುವ ಅನಿಲಗಳ ಮಿಶ್ರಣ ಬೀರುವ ಒತ್ತಡ ಈ ಮಿಶ್ರಣದಲ್ಲಿರುವ ಪ್ರತಿಯೊಂದು ಅನಿಲದ ಪ್ರತ್ಯೇಕ ಒತ್ತಡಗಳ ಮೊತ್ತಕ್ಕೆ ಸಮವಾಗಿರುತ್ತದೆಂದು ಡಾಲ್ಟನ್ ತೋರಿಸಿದ. ಒಂದೊಂದು ಅನಿಲವು ಬೀರುವ ಒತ್ತಡವನ್ನು ಅದರ ಆಂಶಿಕ ಒತ್ತಡವೆಂದು ಕರೆದ. ಈ ನಿಯಮವನ್ನು ಸಂಯೋಗ ಒತ್ತಡಗಳ ನಿಯಮವೆಂದೂ (ಲಾ ಆಫ್ ಆಡಿಟಿವ್ ಪ್ರೆಷರ್ಸ್) ಕರೆಯುವುದಿದೆ. ಗಣಿತೀಯವಾಗಿ ವ್ಯಕ್ತಪಡಿಸಿದಲ್ಲಿ,

ಇಲ್ಲಿ  ಅನಿಲಮಿಶ್ರಣದ ಒಟ್ಟು ಒತ್ತಡ,  ಇತ್ಯಾದಿ = ಆ ಮಿಶ್ರಣದಲ್ಲಿ ಇರುವ ವಿವಿಧ ಅನಿಲಗಳ ಆಂಶಿಕ ಒತ್ತಡಗಳು. ಈ ನಿಯಮದ ರೀತ್ಯ, ಪ್ರತಿಯೊಂದು ಅನಿಲವೂ ತಾನು ಅನಿಲ ಮಿಶ್ರಣದ ಇಡೀ ಜಾಗವನ್ನು ಆಕ್ರಮಿಸಿಕೊಂಡಾಗ (ಅಂದರೆ ಅನಿಲ ಮಿಶ್ರಣದ ಗಾತ್ರದಷ್ಟು) ಎಷ್ಟು ಮೊತ್ತದ ಒತ್ತಡವನ್ನು ಬೀರಬಹುದೋ ಅಷ್ಟೇ ಒತ್ತಡವನ್ನು ಪ್ರತ್ಯೇಕವಾಗಿ ಬೀರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ನಿಯಮದ ಪ್ರಕಾರ ತೇವಾಂಶವುಳ್ಳ ವಾಯುವಿನ ಒತ್ತಡವನ್ನೂ ಆ ವಾಯುವಿನಲ್ಲಿನ ತೇವದ ಒತ್ತಡವನ್ನೂ ಅಳೆದು ಶುಷ್ಕವಾಯುವಿನ ಇಲ್ಲವೆ ಶುಷ್ಕರೂಪದಲ್ಲಿರುವ ಮತ್ತಾವುದೋ ಅನಿಲದ ಒತ್ತಡವನ್ನಾದರೂ ನಿರ್ಧರಿಸಬಹುದು. ಅನಿಲ ಮಿಶ್ರಣವೊಂದನ್ನು ಯಾವುದೇ ದ್ರಾವಕದಲ್ಲಿ ಲೀನಮಾಡಿದಾಗ ಅದರಲ್ಲಿ ಲೀನಗೊಂಡ ಅನಿಲಗಳೊಂದರ ತೂಕವೂ ಆಯಾ ಅನಿಲದ ಆಂಶಿಕ ಒತ್ತಡಕ್ಕೆ ಅನುಗುಣವಾಗಿರುತ್ತದೆಂಬುದನ್ನು ಇದರಿಂದ ತಿಳಿಯಬಹುದು.
(ಕೆ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ